ಆಲ್ಜರ್ ಹೊರೇಷಿಯೊ
(1834-1899). ಅಮೆರಿಕದ ಪ್ರಸಿದ್ಧ ಬಾಲಸಾಹಿತ್ಯಕರ್ತೃ. ಜನನ ಮಸಾಚುಸೆಟ್ಸ್ ಸಂಸ್ಥಾನದ ರೆವರೆ ಎಂಬಲ್ಲಿ, ಹಾವರ್ಡ್ ವಿಶ್ವವಿದ್ಯಾನಿಲಯದ ದೇವತಾಶಾಸ್ತ್ರ ಶಾಖೆಯಿಂದ ಪದವಿ ಪಡೆದು, ಎರಡು ವರ್ಷ ಖಾಸಗಿಯಾಗಿ ಪಾಠ ಹೇಳಿ ಹಣಸಂಪಾದಿಸುತ್ತಿದ್ದ. 1864ರಲ್ಲಿ ಧರ್ಮೋಪದೇಶಕನ ಕೆಲಸ ದೊರಕಿತು. ಆದರೆ ಆತ ಬಹಳ ಕಾಲ ಆ ವೃತ್ತಿಯಲ್ಲಿರಲಿಲ್ಲ. ಒಂದು ಸಲ ನ್ಯೊಯಾರ್ಕಿಗೆ ಹೋದಾಗ, ಅಲ್ಲಿನ ಬೀದಿಗಳಲ್ಲಿ ಅಲೆಯುತ್ತಿದ್ದ ಬಡ ಹುಡುಗರಸ್ಥಿತಿಯನ್ನು ಕಂಡು ಮನಸ್ಸು ಕರಗಿತು. ಅವರ ಸ್ಥಿತಿಗತಿಗಳನ್ನು ಉತ್ತಮಗೊಳಿಸಬೇಕು ಎನಿಸಿತು. ಆಗ ಆತ ನ್ಯೂಯಾರ್ಕಿನಲ್ಲಿ ನೆಲೆಸಿದ್ದ. ಬೀದಿಗಳಲ್ಲಿ ವೃತ್ತಪತ್ರಿಕೆಗಳನ್ನು ಮಾರುತ್ತಿದ್ದ ಹುಡುಗರ ನಿವಾಸವೊಂದಕ್ಕೆ ಆಗಾಗ ಭೇಟಿಕೊಟ್ಟು, ಅಲ್ಲಿನ ಬಾಲಕರ ಕಷ್ಟ ಕಾರ್ಪಣ್ಯಗಳನ್ನು ಕುರಿತು ವಿಚಾರಮಾಡಿದ. ಅವರು ಬಡವರಾದರೂ ಪ್ರಾಮಾಣಿಕರಾಗಿರುವುದಾಗಿ ಕಂಡುಬಂದಿತು. ಅವರ ಜೀವನರೀತಿ ವೀರೋಚಿತವಾಗಿರುವುದನ್ನು ಮೆಚ್ಚಿ, ಆತ ಅವರ ಆಶ್ರಯದಾತನಾದ. 

ಆ ಹುಡುಗರ ಸಾಹಸ ಜೀವನವನ್ನೇ ಅವಲಂಬಿಸಿ, ಬಾಲಕರ ಪತ್ರಿಕೆಗಳಿಗೆ ಕಟ್ಟುಕಥೆಗಳನ್ನು ಬರೆಯಲು ಉಪಕ್ರಮಿಸಿದ (1867), ರ್ಯಾಗ್ಡ್ ಡಿಕ್ (ಚಿಂದಿ ಬಟ್ಟೆಯ ಡಿಕ್-1867) ಎಂಬ ಕಥೆಯನ್ನು ಬರೆದಾಗ, ಅದು ಜನಪ್ರಿಯವಾದುದನ್ನು ಕಂಡು, ತನ್ನ ಜೀವಮಾನವನ್ನೆಲ್ಲ ಅಂಥ ಕಥೆಗಳಿಗಾಗಿಯೇ ಮೀಸಲಾಗಿರಿಸಿದ. 1899ರಲ್ಲಿ ಕಾಲವಾಗುವ ಹೊತ್ತಿಗೆ ಆತ 135 ಪುಸ್ತಕಗಳನ್ನು ಬರೆದು, ಒಟ್ಟು ಎರಡು ಕೋಟಿ ಪ್ರತಿಗಳನ್ನು ಮಾರಿದ್ದನಂತೆ. 

ಈ ಕಟ್ಟುಕಥೆಗಳ ವಿಷಯ ಧೈರ್ಯ ಮತ್ತು ಸಾಮಯಿಕ ಉಪಾಯಗಳಿಂದ ಕೂಡಿದ ಬಡಮಕ್ಕಳ ಸಾಹಸಕಾರ್ಯಗಳ ನಿರೂಪಣೆ. ಅವುಗಳಲ್ಲಿ ಕಳೆದುಹೋದ ಜೋಳಿಗೆ ಚೀಲವನ್ನು ಹುಡುಕಿ ತಂದ ವೀರನೊಬ್ಬ ; ಮುಳುಗಿ ಹೋಗುತ್ತಿದ್ದ ಆಸ್ತಿವಂತ ಯುವತಿಯನ್ನು ರಕ್ಷಿಸಿದವ ಮತ್ತೊಬ್ಬ ; ಓಡಿಹೋದ ಕುದುರೆಯನ್ನು ಹಿಡಿದು ತಂದ ವೀರ ಇನ್ನೊಬ್ಬ. ಇಂಥ ಕಥೆಗಳು ಮಕ್ಕಳಿಗೆ ಮೆಚ್ಚುಗೆಯಾಗುವುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳು, ಸದಾ ಹಿರಿಯರ ಹಿಡಿತಕ್ಕೆ ಸಿಕ್ಕಿಬಿದ್ದು, ಸ್ವಾತಂತ್ರದಿಂದ ಕೆಲಸಕ್ಕೆ ನುಗ್ಗಲು ಅವಕಾಶ ಬೇಕೆಂದು ಹಂಬಲಿಸುತ್ತಿರುವವರು. ಆ ಆಸೆಯನ್ನು ಮನಸ್ಸಿನಲ್ಲಾದರೂ ಪೂರೈಸಿಕೊಳ್ಳಲು ಸಹಾಯಕವಾಗುವ ಈ ಕಥೆಪುಸ್ತಕಗಳು ಅಂಗಡಿಗಳಲ್ಲಿ ಅಂದವಾಗಿ ಪ್ರದರ್ಶಿತವಾಗಿರುವುದನ್ನು ಕಂಡಾಗ, ಮಕ್ಕಳಿಗೆ ಒಂದು ಭಂಡಾರವೇ ಕಣ್ಣ ಮುಂದೆ ತೆರೆದು ನಿಂತಂತೆ ಭಾಸವಾಗುವುದು. ಧೈರ್ಯದಿಂದ ಮುಂದೆ ನುಗ್ಗಿ ಕಾರ್ಯಸಾಧನೆಯನ್ನು ಮಾಡಿಕೊಂಡು ಬರುವ ವೀರಬಾಲಕರ ಸಾಹಸಕಾರ್ಯಗಳ ರುಚಿಯನ್ನು ಅನುಭವಿಸಲು ಆಗ ಅವರು ಉತ್ಸುಕರಾಗುವರು. ಹೀಗೆ ಆಲ್ಜರ್‍ನ ಕಟ್ಟುಕಥೆಗಳು ಎರಡು ತಲೆಮಾರಿನ ಕಾಲ ಮಕ್ಕಳ ಮೇಲೆ ತಮ್ಮ ಪ್ರಭಾವವನ್ನು ಬೀರಿದುವು. ರ್ಯಾಗ್ಡ್ ಡಿಕ್‍ನೊಂದಿಗೆ ಲಕ್ ಅಂಡ್ ಪ್ಲಕ್ (1869) ಟ್ಯಾಟರ್ಡ್ ಟಾಮ್ (1871)-ಇವು ಅವನ ಪ್ರಸಿದ್ಧ ಧಾರಾವಾಹಿ ಕಥೆಗಳು. 
	 											 (ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ